ಜುಗಾರಿ ಕ್ರಾಸ್ - 1
ಆಶ್ಚರ್ಯವಾಗಬಹುದು ಸಹಸ್ರಾರು ಚದರಮೈಲಿ ವಿಸ್ತಾರದ ಕಾಡಿನ ನಟ್ಟನಡುವೆ ನಾಲ್ಕಾರು ದಾರಿ ಕೂಡುವ ಈ ಸರ್ಕಲ್ಲಿಗೆ ಯಾಕೆ ಜುಗಾರಿ ಕ್ರಾಸ್ ಎಂದು ಹೆಸರಿಟ್ಟಿದ್ದಾರೆ ಎಂದು ! ಆ ನಿರ್ಜನ ಪ್ರದೇಶದಲ್ಲಿ ಯಾವ ಗಿರಾಕಿ ಸಿಕ್ಕುತ್ತದೆಂದು ಕಾಯುತ್ತಾ ಬಾಡಿಗೆ ಟ್ಯಾಕ್ಸಿಗಳು ನಿಂತಿರುತ್ತವೆಂದು! ಆ ಕೂಡು ರಸ್ತೆಗಳಲ್ಲಿ ಧರ್ಮಸ್ಥಳ, ಸುಬ್ರಮಣ್ಯ, ಕೊಲ್ಲೂರು, ಉಡುಪಿ, ಕಾರ್ಕಳ ಮುಂತಾದಲ್ಲಿಗೂ ಹೋಗುವ ರಸ್ತೆಗಳಿರುವುದರಿಂದ ಅಲ್ಲಿಗೆ ಹೋಗುವವರು ಟ್ಯಾಕ್ಸಿ ಮಾಡಿಕೊಂಡು ಹೋಗುತ್ತಾರೇನೋ ಎಂದು ಶಂಕಿಸಬಹುದು. ಈ ಪುಣ್ಯಕ್ಷೇತ್ರಗಳಿಗೆ ಹೋಗಬಹುದೆಂಬುದೇನೋ ನಿಜ! ಆದರೆ ಅಲ್ಲಿಗೆ ಬಂದು ಟ್ಯಾಕ್ಸಿ ಮಾಡಿಕೊಂಡು ಹೋಗುವವರು ಯಾರು? ಈ ಪ್ರಶ್ನೆಗೆ ಮಾತ್ರ ಉತ್ತರ ಕೇಳಬೇಡಿ! ಅಲ್ಲಿ ಫಾರೆಸ್ಟ್ ಚೆಕ್ ಪೋಸ್ಟೀನ ಬಳಿ ಒಂದು ದೊಡ್ಡ ಚಹಾ ಹೋಟೆಲ್ಲು ಸದಾ ನೊಣ ಹೊಡೆಯುತ್ತಾ ಬಿದ್ದಿರುತ್ತದೆ. ಅಲ್ಲಿರುವ ಇಬ್ಬರೇ ಗಿರಾಕಿ, ಫಾರೆಸ್ಟರ್ ಮತ್ತು ಗಾರ್ಡಿಗೆ ಹಡಿಬಿಟ್ಟಿ ಚಾ ಒದಗಿಸುತ್ತ ಅದನ್ನು ನಡೆಸುತ್ತಿರುವವರು ಯಾರು? ಅದನ್ನು ಕಟ್ಟಿಸಿದವರು ಯಾರು? ಹೀಗೆ ಈ ಭಯಂಕರ ಏಕಾಂತದ ಜುಗಾರಿ ಕ್ರಾಸ್ ನೋಡಿದವರಿಗೆ ನೋಡಿದವರಿಗೆ ನೂರಾರು ಕೌತುಕದ ಪ್ರಶ್ನೆಗಳು ಕಾಡುವುದರಲ್ಲಿ ಅನುಮಾನವೇ ಇಲ್ಲ.
0 Comments
“ದಯವಿಟ್ಟು ನಿಮ್ಮ Google account ಮೂಲಕ login ಆಗಿ comment ಮಾಡಿ.