ಅಮ್ಮ, ಜಗದ ಮೊದಲ ಮತ್ತು ಕೊನೆಯ ಸಾಂತ್ವನ
ಜಗತ್ತಿನ ಎಲ್ಲಾ ಭಾಷೆಗಳೂ ಮೌನವಾಗುವ, ಎಲ್ಲಾ ಪದಕೋಶಗಳೂ ಬರಿದಾಗುವ ಒಂದು ಭಾವನೆಯನ್ನು ಎರಡೇ ಅಕ್ಷರದಲ್ಲಿ ಹಿಡಿದಿಡಲು ಸಾಧ್ಯವೇ? "ಅಮ್ಮ" - ಈ ಶಬ್ದ ಕೇವಲ ಅಕ್ಷರಗಳ ಗುಚ್ಚವಲ್ಲ. ಅದೊಂದು ಅನುಭೂತಿ. ಅದೊಂದು ಸ್ಪರ್ಶ. ಹೊಕ್ಕಳಬಳ್ಳಿಯ ಸಂಬಂಧದಿಂದ ಶುರುವಾಗಿ, ನಮ್ಮ ಉಸಿರು ನಿಲ್ಲುವವರೆಗೂ ನಮ್ಮೊಳಗೆ ಜೀವಂತವಾಗಿರುವ ಒಂದು ಜೀವಂತ ಪವಾಡ.
ದೇವರನ್ನು ಯಾರು ಕಂಡಿದ್ದಾರೆ? ನನಗಂತೂ ಗೊತ್ತಿಲ್ಲ. ಆದರೆ, ನೋವಿನಲ್ಲಿ ಚೀರುವಾಗ, ಸಂತೋಷದಲ್ಲಿ ಉಕ್ಕುವಾಗ, ಭಯದಲ್ಲಿ ನಡುಗುವಾಗ, ನಮ್ಮ ಬಾಯಿಂದ ಬರುವ ಮೊದಲ ಶಬ್ದ "ಅಮ್ಮ". ಅವಳೇ ನಮಗೆ ಕಂಡ ದೇವರು. ನವಮಾಸಗಳ ಕಾಲ ತನ್ನ ಗರ್ಭದಲ್ಲಿ ನಮ್ಮನ್ನು ಹೊತ್ತು, ತನ್ನ ಉಸಿರಲ್ಲೇ ನಮಗೆ ಉಸಿರು ಕೊಟ್ಟು, ತನ್ನ ರಕ್ತವನ್ನೇ ಹಾಲಾಗಿಸಿ ಉಣಬಡಿಸಿದ ಆ ತ್ಯಾಗಮಯಿಗೆ ಬೇರೆ ಯಾವ ಹೆಸರು ತಾನೇ ಸರಿಹೊಂದೀತು?
ಬಾಲ್ಯದ ನೆನಪುಗಳ ಪುಟ ತಿರುಗಿಸಿದರೆ, ಪ್ರತಿ ಪುಟದಲ್ಲೂ ಅವಳದೇ ಚಿತ್ರ. ನಾವು ಮೊದಲ ಹೆಜ್ಜೆ ಇಟ್ಟಾಗ ನಮಗಿಂತ ಹೆಚ್ಚು ಸಂಭ್ರಮಿಸಿದ್ದು ಅವಳು. ನಮ್ಮ ಬಾಯಿಂದ ಮೊದಲ ತೊದಲು ನುಡಿ ಬಂದಾಗ, ಜಗತ್ತಿನ ಎಲ್ಲ ಸಂಗೀತವನ್ನೂ ಕೇಳಿದಂತೆ ಆನಂದಿಸಿದ್ದು ಅವಳು. ಜ್ವರ ಬಂದು ಮೈ ಸುಡುತ್ತಿರುವ ರಾತ್ರಿ, ತನ್ನ ಸೀರೆಯ ಸೆರಗನ್ನು ತಣ್ಣೀರಲ್ಲಿ ಅದ್ದಿ, ನಮ್ಮ ಹಣೆಗೆ ಒತ್ತಿ, ಇಡೀ ರಾತ್ರಿ ನಿದ್ದೆಗೆಟ್ಟು ನಮ್ಮ ತಲೆ ಸವರುತ್ತಿದ್ದ ಆ ಕೈಗಳ ಸ್ಪರ್ಶಕ್ಕಿಂತ ಮಿಗಿಲಾದ ಸಂಜೀವಿನಿ ಜಗತ್ತಿನಲ್ಲಿದೆಯೇ? ನಾವು ಬಿದ್ದಾಗ ನಮಗಾದ ಗಾಯಕ್ಕಿಂತ ಅವಳ ಎದೆಗಾದ ನೋವೇ ಹೆಚ್ಚಾಗಿತ್ತು. ನಮ್ಮ ಕಣ್ಣೀರ ಹನಿ ಅವಳ ಹೃದಯವನ್ನೇ ಕರಗಿಸುತ್ತಿತ್ತು.
ಅವಳ ಜಗತ್ತು ಚಿಕ್ಕದು. ಅಡುಗೆಮನೆ, ದೇವರಕೋಣೆ, ಮನೆಯ ಜಗುಲಿ... ಇವಿಷ್ಟರಲ್ಲೇ ಅವಳ ದಿನ ಕಳೆದುಹೋಗುತ್ತಿತ್ತು. ಆದರೆ ಆ ಪುಟ್ಟ ಜಗತ್ತಿನ ರಾಜ-ರಾಣಿ ನಾವೇ ಆಗಿದ್ದೆವು. ಅವಳು ತನಗಾಗಿ ಎಂದೂ ಬದುಕಲೇ ಇಲ್ಲ. ಅವಳ ಇಷ್ಟಗಳು, ಅವಳ ಕನಸುಗಳು, ಅವಳ ಆಸೆಗಳು ಎಲ್ಲವೂ ನಮ್ಮ ಖುಷಿಯ ಮುಂದೆ ನಗಣ್ಯವಾಗಿದ್ದವು. ತಟ್ಟೆಯಲ್ಲಿರುವ ಕೊನೆಯ ರೊಟ್ಟಿಯ ತುಂಡನ್ನು "ನನಗೆ ಹಸಿವಿಲ್ಲ ಕಣೋ, ನೀನೇ ತಿನ್ನು" ಎಂದು ಹೇಳಿ, ಖಾಲಿ ಹೊಟ್ಟೆಯಲ್ಲೇ ನೀರು ಕುಡಿದು ಮಲಗಿದ ರಾತ್ರಿಗಳು ಎಷ್ಟೋ! ಹಬ್ಬಕ್ಕೆ ನಮಗೆ ಹೊಸ ಬಟ್ಟೆ ಕೊಡಿಸಿ, ತಾನು ಹಳೆಯ ಸೀರೆಯನ್ನೇ ಉಟ್ಟು ಸಂಭ್ರಮಿಸಿದ ದಿನಗಳು ಎಷ್ಟೋ! ಅವಳ ಈ ತ್ಯಾಗವನ್ನು ಯಾವ ತಕ್ಕಡಿಯಲ್ಲಿ ತೂಗಲು ಸಾಧ್ಯ? ಅವಳ ಪ್ರೀತಿಯ ಆಳವನ್ನು ಯಾವ ಮಾಪಕದಿಂದ ಅಳೆಯಲು ಸಾಧ್ಯ?
ಹದಿಹರೆಯದಲ್ಲಿ ಜಗತ್ತು ನಮಗೆ ವಿಶಾಲವಾಗಿ ತೆರೆದುಕೊಳ್ಳುತ್ತದೆ. ಗೆಳೆಯರು, ಸಿನೆಮಾ, ಹೊಸ ಲೋಕ... ನಮ್ಮ ಆದ್ಯತೆಗಳು ಬದಲಾಗುತ್ತವೆ. ಆಗ ಅಮ್ಮನ ಕಾಳಜಿ ನಮಗೆ ಕನಿಷ್ಟವಾಗಿ ಕಾಣುತ್ತದೆ. "ಎಲ್ಲಿಗೆ ಹೋಗಿದ್ದೆ?", "ಯಾಕಿಷ್ಟು ಹೊತ್ತು?", "ಊಟ ಮಾಡಿದ್ದೀಯಾ?" - ಅವಳ ಈ ಪ್ರಶ್ನೆಗಳು ನಮಗೆ ಬಂಧನದಂತೆ ಭಾಸವಾಗುತ್ತವೆ. ಅವಳ ಜಗತ್ತಿನಿಂದ ನಾವು ದೂರ ಸರಿಯಲು ಬಯಸುತ್ತೇವೆ. ಆದರೆ, ಅವಳು ಮಾತ್ರ ತನ್ನ ಪ್ರಪಂಚದ ಕೇಂದ್ರಬಿಂದುವಾದ ನಮ್ಮ ಸುತ್ತಲೇ ಸುತ್ತುತ್ತಿರುತ್ತಾಳೆ. ನಾವು ಕೋಪದಲ್ಲಿ ಮಾತಾಡದಿದ್ದಾಗ, ರಾತ್ರಿಯಿಡೀ ಮೌನವಾಗಿ ಅತ್ತಿರುತ್ತಾಳೆ. ನಾವು ಮನೆಯಿಂದ ದೂರವಿದ್ದಾಗ, ಪ್ರತಿ ಕ್ಷಣ ನಮಗಾಗಿ ಪ್ರಾರ್ಥಿಸುತ್ತಿರುತ್ತಾಳೆ. ಅವಳ ಪ್ರೀತಿಯನ್ನು ನಾವು ಅರ್ಥಮಾಡಿಕೊಳ್ಳುವಷ್ಟರಲ್ಲಿ, ಕಾಲ ನಮ್ಮಿಂದ ಬಹಳಷ್ಟು ಅಮೂಲ್ಯ ಕ್ಷಣಗಳನ್ನು ಕಸಿದುಕೊಂಡಿರುತ್ತದೆ.
ನಾವೂ ಬೆಳೆದು ದೊಡ್ಡವರಾಗುತ್ತೇವೆ. ಉದ್ಯೋಗ, ಮದುವೆ, ಮಕ್ಕಳು ಎಂದು ನಮ್ಮದೇ ಒಂದು ಜಗತ್ತು ಸೃಷ್ಟಿಯಾಗುತ್ತದೆ. ಆಗ ಅಮ್ಮನ ಮನೆ ವರ್ಷಕ್ಕೊಮ್ಮೆ ಬಂದು ಹೋಗುವ ಪ್ರವಾಸಿ ತಾಣವಾಗುತ್ತದೆ. ಫೋನಿನಲ್ಲಿ "ಚೆನ್ನಾಗಿದ್ದೀಯಾ ಅಮ್ಮಾ?" ಎಂದು ಕೇಳುವಷ್ಟಕ್ಕೇ ನಮ್ಮ ಕರ್ತವ್ಯ ಮುಗಿಯಿತೆಂದು ಭಾವಿಸುತ್ತೇವೆ. ಆದರೆ ಆ ದನಿಯ ಇನ್ನೊಂದು ಬದಿಯಲ್ಲಿ, ನಮ್ಮ ದನಿ ಕೇಳಲೆಂದೇ, ನಮ್ಮ ದಾರಿ ಕಾಯುತ್ತಲೇ ದಿನ ದೂಡುವ ಒಂದು ಜೀವವಿರುತ್ತದೆ ಎಂಬ ಸತ್ಯ ನಮಗೆ ಹೊಳೆಯುವುದೇ ಇಲ್ಲ. ಅವಳ ಆರೋಗ್ಯ ಹೇಗಿದೆ, ಅವಳು ಊಟ ಸರಿಯಾಗಿ ಮಾಡುತ್ತಿದ್ದಾಳಾ, ಅವಳಿಗೆ ಒಂಟಿತನ ಕಾಡುತ್ತಿದೆಯೇ? ಈ ಯೋಚನೆಗಳೆಲ್ಲಾ ನಮ್ಮ ಬಿಡುವಿಲ್ಲದ ಬದುಕಿನಲ್ಲಿ ಮರೆತೇ ಹೋಗುತ್ತವೆ.
ಕಾಲನ ಹೊಡೆತಕ್ಕೆ ಅವಳ ಶರೀರ ಬಾಗುತ್ತದೆ. ಕಣ್ಣಿನ ದೃಷ್ಟಿ ಮಂಜಾಗುತ್ತದೆ. ನೆನಪಿನ ಶಕ್ತಿ ಕುಂದುತ್ತದೆ. ಒಂದು ಕಾಲದಲ್ಲಿ ನಮಗೆ ಜಗತ್ತಿನ ಜ್ಞಾನವನ್ನೆಲ್ಲಾ ಕಥೆಗಳ ಮೂಲಕ ಹೇಳುತ್ತಿದ್ದ ಅಮ್ಮ, ಇಂದು ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಾಳೆ. ಆಗ ನಮಗೆ ಚಂಚಲತೆ. ಅವಳ ನಿಧಾನಗತಿಯ ನಡಿಗೆ ನಮ್ಮ ವೇಗದ ಬದುಕಿಗೆ ಹೊರೆಯೆನಿಸುತ್ತದೆ. ನಮಗೆ ತೊದಲು ನುಡಿ ಕಲಿಸಿದವಳಿಗೆ, ನಾವು ಇಂದು ತಾಳ್ಮೆಯಿಂದ ಮಾತಾಡಲು ಮರೆಯುತ್ತೇವೆ. ಅವಳ ಸುಕ್ಕುಗಟ್ಟಿದ ಕೈಗಳನ್ನು ಹಿಡಿದು, "ಭಯಪಡಬೇಡ ಅಮ್ಮಾ, ನಾನಿದ್ದೇನೆ" ಎಂದು ಹೇಳಬೇಕಾದ ನಾವು, ಅವಳನ್ನು ಅಸಹಾಯಕಳನ್ನಾಗಿಸಿಬಿಡುತ್ತೇವೆ. ಆಗ ಅವಳ ಕಣ್ಣಲ್ಲಿ ಜಿನುಗುವ ಹನಿ, ಅದು ಕಣ್ಣೀರಲ್ಲ... ಅದು ನಾವು ಅವಳ ಗರ್ಭದಲ್ಲಿದ್ದಾಗ ನಮ್ಮನ್ನು ಪೋಷಿಸಿದ ರಕ್ತದ ಹನಿ. ಅದನ್ನು ಅಳಿಸುವ ಶಕ್ತಿ ಜಗತ್ತಿನ ಯಾವ ಶಕ್ತಿಗೂ ಇಲ್ಲ.
ಎಲ್ಲವನ್ನೂ ಸಹಿಸಿಕೊಂಡು, ಕೊನೆಗೊಂದು ದಿನ ಅವಳು ಯಾರ ಕಣ್ಣಿಗೂ ಕಾಣದ ಲೋಕಕ್ಕೆ ಹೊರಟುಹೋಗುತ್ತಾಳೆ. ಆಗ ಇಡೀ ಮನೆ ಸ್ಮಶಾನದಂತೆ ಭಾಸವಾಗುತ್ತದೆ. ಅವಳಿಲ್ಲದ ಅಡುಗೆಮನೆ ಬಿಕೋ ಎನ್ನುತ್ತದೆ. ಅವಳ ಧ್ವನಿ ಕೇಳಿಸದ ದೇವರ ಕೋಣೆ ಮೂಕವಾಗುತ್ತದೆ. ಅವಳು ಕೂರುತ್ತಿದ್ದ ಜಗುಲಿ ಖಾಲಿಯಾಗಿ ನಮ್ಮನ್ನು ದಿಟ್ಟಿಸಿ ನೋಡುತ್ತದೆ. ಆಗ ಶುರುವಾಗುತ್ತದೆ ನೋಡಿ ನಿಜವಾದ ಪಶ್ಚಾತ್ತಾಪ. ಅವಳೊಂದಿಗೆ ಇನ್ನಷ್ಟು ಸಮಯ ಕಳೆಯಬೇಕಿತ್ತು, ಅವಳನ್ನು ಇನ್ನಷ್ಟು ಚೆನ್ನಾಗಿ ನೋಡಿಕೊಳ್ಳಬೇಕಿತ್ತು, ಒಮ್ಮೆಯಾದರೂ ಅವಳ ಮಡಿಲಲ್ಲಿ ತಲೆಯಿಟ್ಟು "ಅಮ್ಮಾ, ನೀನಿಲ್ಲದೆ ನಾನೇನೂ ಅಲ್ಲ" ಎಂದು ಹೇಳಬೇಕಿತ್ತು... ಈ ಯೋಚನೆಗಳು ಎದೆಯನ್ನು ಕೊರೆಯುತ್ತವೆ.
ಅಮ್ಮನೆಂದರೆ ಕೇವಲ ನೆನಪಲ್ಲ. ಅವಳು ನಮ್ಮ ರಕ್ತದಲ್ಲಿ ಬೆರೆತುಹೋದ ಭಾವ. ನಾವು ತಿನ್ನುವ ಪ್ರತಿ ತುತ್ತಿನಲ್ಲೂ ಅವಳ ಕೈಯ ರುಚಿ ಇರುತ್ತದೆ. ನಾವು ತೆಗೆದುಕೊಳ್ಳುವ ಪ್ರತಿ ಉಸಿರಲ್ಲೂ ಅವಳ ಆಶೀರ್ವಾದವಿರುತ್ತದೆ. ನಾವು ಎದುರಿಸುವ ಪ್ರತಿ ಸಂಕಷ್ಟದಲ್ಲೂ ಅವಳ ನೆನಪೇ ಧೈರ್ಯವಾಗಿ ನಿಲ್ಲುತ್ತದೆ. ಅವಳು ಬಿಟ್ಟುಹೋದ ಸೀರೆಗಳ ಗಂಧದಲ್ಲಿ, ಅವಳು ಜೋಪಾನವಾಗಿಟ್ಟ ಪಾತ್ರೆಗಳಲ್ಲಿ, ಅವಳ ಹಳೆಯ ಫೋಟೋಗಳಲ್ಲಿ ಅವಳು ಇಂದಿಗೂ ಜೀವಂತ.
ಅಮ್ಮನೆಂಬ ಎರಡಕ್ಷರದ ಜೀವಂತ ಪವಾಡಕ್ಕೆ ಸಾವಿಲ್ಲ. ಶರೀರ ಮಣ್ಣಾದರೂ, ಅವಳ ಪ್ರೀತಿ ಚಿರಂಜೀವಿ. ಈ ಜಗತ್ತಿನಲ್ಲಿ ನಾವು ಏನೇ ಸಾಧಿಸಿದರೂ, ಎಷ್ಟೇ ಎತ್ತರಕ್ಕೆ ಬೆಳೆದರೂ, ನಾವು ನಮ್ಮ ಅಮ್ಮನ ಮಕ್ಕಳು ಮಾತ್ರ. ಅವಳ ಮಡಿಲಿಗಿಂತ ಸುರಕ್ಷಿತವಾದ ತಾಣ ಬೇರೊಂದಿಲ್ಲ. ಅವಳ ಪ್ರೀತಿಗಿಂತ ಪವಿತ್ರವಾದ ಭಾವ ಮತ್ತೊಂದಿಲ್ಲ. ಅವಳ ತ್ಯಾಗಕ್ಕೆ ಬೆಲೆ ಕಟ್ಟಲಾಗದು, ಅವಳ ಋಣವನ್ನು ಎಂದಿಗೂ ತೀರಿಸಲಾಗದು.
ಅಮ್ಮಾ... ನೀನೊಂದು ಎಂದಿಗೂ ಬತ್ತದ ವಾತ್ಸಲ್ಯದ ಸಾಗರ. ಕ್ಷಮಿಸು, ನಿನ್ನನ್ನು ಅರ್ಥಮಾಡಿಕೊಳ್ಳುವುದು ತಡಮಾಡಿದೆವು.
ನಿಮ್ಮ ಹವ್ಯಾಸಿ ಬರಹಗಾರ
With You
0 Comments
“ದಯವಿಟ್ಟು ನಿಮ್ಮ Google account ಮೂಲಕ login ಆಗಿ comment ಮಾಡಿ.